ಒಂದು ಆದರ್ಶ, ಶಾಂತಿಯುತ ಸಮಾಜ ನಿರ್ಮಾಣವಾಗ ಬೇಕಾದರೆ ಅದರಲ್ಲಿ ಧರ್ಮದ ಪಾತ್ರ ಬಲು ಹಿರಿದು. ಧರ್ಮಗಳು ಎಂದೂ ಒಗಟುಗಳಾಗಿರಬಾರದು. ಮಾತ್ರವಲ್ಲ, ಅದು ಎಂದೂ ಕೆಲವೇ ಜನರ ಸ್ವತ್ತು ಕೂಡ ಆಗಿರಬಾರದು. ಧರ್ಮವು ಬೋಧಿಸುವ ನೈತಿಕ ಮೌಲ್ಯಗಳು ಸಮಾಜದಲ್ಲಿ ಬೆಳೆದು ಬಂದರೆ ಮಾತ್ರ ರಾಷ್ಟ್ರದಲ್ಲಿ ಶಾಶ್ವತ ಶಾಂತಿ, ನೆಮ್ಮದಿ ನೆಲೆಸಬಲ್ಲುದು.
ಇಸ್ಲಾಮ್ ಧರ್ಮವು ಸಂಪೂರ್ಣ ಮಾನವಕುಲದ ಸರ್ವತೋಮುಖ ಏಳಿಗೆಗೆ ಪೂರಕವಾದ ಉದಾತ್ತ ಮೌಲ್ಯಗಳನ್ನು ಹೊಂದಿದೆ. ಅದು ಕೇವಲ ಕೆಲವು ನಂಬಿಕೆ, ಸಂಪ್ರದಾಯ ಅಥವಾ ಆರಾಧನಾ ವಿಧಿಗಳಿಗೆ ಸೀಮಿತವಾದ ಧರ್ಮವಲ್ಲ. ಮಾನವ ಜೀವನದ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ನೈತಿಕ ಇತ್ಯಾದಿ ಎಲ್ಲಾ ರಂಗಗಳಿಗೂ ಅನ್ವಯವಾಗುವ ಮಾರ್ಗದರ್ಶನವನ್ನು ಅದು ನೀಡುತ್ತದೆ.
ಧಾರ್ಮಿಕ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಸಾಹಿತ್ಯಗಳು ತನ್ನದೇ ಪಾತ್ರವನ್ನು ವಹಿಸುತ್ತದೆ. ಇಸ್ಲಾಮೀ ಸಾಹಿತ್ಯಗಳು ಕನ್ನಡದಲ್ಲಿ ತೀರಾ ಅಪರಿಚಿತವಾಗಿದ್ದ ಕಾಲವೊಂದಿತ್ತು. ಈ ಕೊರತೆಯನ್ನು ನೀಗಿಸಲು ಜಮಾಅತೆ ಇಸ್ಲಾಮೀ ಹಿಂದ್- ಕರ್ನಾಟಕ ಮತ್ತು ಗೋವಾ ಘಟಕವು 1988ರಲ್ಲಿ ʻಶಾಂತಿ ಪ್ರಕಾಶನʼವನ್ನು ಸ್ಥಾಪಿಸಿತು. ಕನ್ನಡಿಗರಿಗೆ ಇಸ್ಲಾಮಿನ ಚಿರಂತನ ಮೌಲ್ಯಗಳನ್ನು ಪರಿಚಯಿಸಿ, ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಇರುವ ತಪ್ಪುಕಲ್ಪನೆ, ಅಪನಂಬಿಕೆ, ಪೂರ್ವಗ್ರಹಗಳನ್ನು ನಿವಾರಿಸುವುದೇ ʻಶಾಂತಿ ಪ್ರಕಾಶನʼದ ಉದ್ದೇಶ. ಕೇವಲ ಅರಬಿ, ಉರ್ದು, ಇಂಗ್ಲಿಷ್ ಭಾಷೆಗಳಿಗೆ ಸೀಮಿತವಾಗಿದ್ದ ಇಸ್ಲಾಮೀ ಸಾಹಿತ್ಯಗಳನ್ನು ನಾಡಭಾಷೆ ಕನ್ನಡದಲ್ಲಿ ಪ್ರಕಟಿಸಿ, ಕನ್ನಡಿಗರ ಮಧ್ಯೆ ಸೌಹಾರ್ದದ ಬೆಸುಗೆಯನ್ನು ಅದು ಬೆಸೆದಿದೆ. ʻಶಾಂತಿಯ ಮಾರ್ಗʼ, ʻಒಡೆಯನ ಕರೆʼ, ʻಕೋಮು ಸೌಹಾರ್ದ ಮತ್ತು ಚಾರಿತ್ತ್ಯ ನಿರ್ಮಾಣʼದಂತಹ ವೈಚಾರಿಕ ಕಿರು ಹೊತ್ತಗೆಗಳನ್ನು ಪ್ರಕಟಿಸುವ ಮೂಲಕ ತನ್ನ ಪಯಣವನ್ನು ಪ್ರಾರಂಭಿಸಿದ ಶಾಂತಿ ಪ್ರಕಾಶನ, 1991ರಲ್ಲಿ ʻಕುರ್‌ಆನ್ ವ್ಯಾಖ್ಯಾನ ಭಾಗ-1ನ್ನು (ಪ್ರಥಮ 20 ಅಧ್ಯಾಯಗಳು) ಹೊರತರುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಬೆಳಕನ್ನು ಹರಿಸಿತು.
1356 ಪುಟಗಳ ಈ ಬೃಹತ್ ಗ್ರಂಥವನ್ನು ಕನ್ನಡದ ಜನತೆ ತುಂಬು ಹೃದಯದಿಂದ ಸ್ವಾಗತಿಸಿದರು. ಪ್ರಥಮ ಆವೃತ್ತಿಯು ಕ್ಷಿಪ್ರವಾಗಿ ಮುಗಿದು, ನಾಡಿನಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ನಂತರ 1994ರಲ್ಲಿ ಕುರ್‌ಆನ್ ವ್ಯಾಖ್ಯಾನ ಭಾಗ-2ನ್ನು (ಅಧ್ಯಾಯ 21 ರಿಂದ 114ರ ವರೆಗೆ) ಪ್ರಕಟಿಸಲಾಯಿತು. ಹೀಗೆ ಕುರ್‌ಆನಿಗೆ ಸಂಬಂಧಿಸಿದಂತೆ ಹಲವಾರು ಕೃತಿಗಳು ಹೊರಬಂದಿದ್ದು, 2012ರಲ್ಲಿ ಜಗತ್ಪ್ರಸಿದ್ಧ ಕುರ್‌ಆನ್ ವ್ಯಾಖ್ಯಾನ ಗ್ರಂಥ ʻತಫ್ಹೀಮುಲ್ ಕುರ್‌ಆನ್ʼನ್ನು ಕನ್ನಡದಲ್ಲಿ ಅನುವಾದಗೊಳಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಹೊಸ ಮೈಲುಗಲ್ಲನ್ನು ಸ್ಥಾಪಿಸಿತು. 1988ರಲ್ಲಿ ಒಂದು ಪುಟ್ಟ ಸಂಸ್ಥೆಯಾಗಿ ರೂಪು ತಳೆದು ಇಂದು 250ಕ್ಕಿಂತಲೂ ಅಧಿಕ ಕೃತಿಗಳನ್ನು ಪ್ರಕಾಶಿಸಿ ವಾಚಕರ ಕೈಗಿತ್ತ ಶಾಂತಿ ಪ್ರಕಾಶನ, ತನ್ನ ಈ ದಣಿವರಿಯದ ದುಡಿಮೆಯಿಂದ ಓದುಗ ವೃಂದದಲ್ಲಿ ಅಪಾರ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದೆ. ಅದಕ್ಕೆ ಅದು ಪ್ರಕಟಗೊಳಿಸಿರುವ ಕೃತಿಗಳೇ ಸಾಕ್ಷಿ.
ಇಸ್ಲಾಮ್ ಧರ್ಮವನ್ನು ಸಂಪೂರ್ಣವಾಗಿ ಅರಿಯಲು ಕುರ್‌ಆನಿನಂತೆಯೇ ಹದೀಸ್ ಸಾಹಿತ್ಯ(ಪ್ರವಾದಿ ಚರ್ಯೆ)ಗಳನ್ನು ಅಭ್ಯಸಿಸುವುದು ಅನಿವಾರ್ಯ. ಪ್ರವಾದಿ ವಚನಗಳ ಕಿರು ಹೊತ್ತಗೆಗಳಿಂದ ಹಿಡಿದು ಇತ್ತೀಚೆಗೆ ಮೇರು ಗ್ರಂಥ ʻಸಹೀಹುಲ್ ಬುಖಾರಿʼಯನ್ನು ಪ್ರಕಟಿಸಿರುವುದು ಕನ್ನಡ ಸಾಹಿತ್ಯಕ್ಕೆ ಒಂದು ಅಮೂಲ್ಯ ಕೊಡುಗೆಯೆಂದೇ ಹೇಳಬಹುದು. ಅದೇ ರೀತಿ ಪ್ರವಾದಿ ಮುಹಮ್ಮದ್(ಸ)ರ ಜೀವನ ಚರಿತ್ರೆಗೆ ಸಂಬಂಧಿಸಿದಂತೆಯೇ ಹಲವಾರು ಕೃತಿಗಳು ಪ್ರಕಟವಾಗಿದ್ದು, ಅದರಲ್ಲಿ ʻಪ್ರವಾದಿ ಮುಹಮ್ಮದ್(ಸ): ಜೀವನ ಮತ್ತು ಸಂದೇಶ’ ಬಹಳ ಪ್ರಮುಖವಾದುದು.
ಇಸ್ಲಾಮ್ ಧರ್ಮದ ಬಗ್ಗೆ ವ್ಯಾಪಕ ತಪ್ಪುಕಲ್ಪನೆ, ಅಪನಂಬಿಕೆಗಳು ಹರಡುತ್ತಿರುವ ಪ್ರಸಕ್ತ ದಿನಗಳಲ್ಲಿ ಇಸ್ಲಾಮಿನ ನೈಜ ಚಿತ್ರಣ ಮತ್ತು ವಾಸ್ತವಗಳನ್ನು ತಿಳಿಹೇಳುವ ಅನೇಕ ಪುಸ್ತಕಗಳನ್ನು ಶಾಂತಿ ಪ್ರಕಾಶನ ಪ್ರಕಟಿಸಿದೆ. ಮಾತ್ರವಲ್ಲ ಮಹಿಳೆಯರಿಗಾಗಿ, ಮಕ್ಕಳಿಗಾಗಿ ಬಹಳಷ್ಟು ಉಪಯುಕ್ತ ಪುಸ್ತಕಗಳನ್ನು ಹೊರತಂದಿದೆ.
ಶಾಂತಿ ಪ್ರಕಾಶನವು ತನ್ನ ಪುಸ್ತಕಗಳ ಪ್ರಚಾರಕ್ಕಾಗಿ ರಾಜ್ಯದಾದ್ಯಂತ ಪುಸ್ತಕ ಮೇಳಗಳನ್ನು ಹಮ್ಮಿಕೊಳ್ಳುತ್ತಿದೆ. ʻಶಾಂತಿ ಸಂಚಾರಿ ಪುಸ್ತಕಾಲಯʼ ಮತ್ತು ʻಶಾಂತಿ ಸಾಹಿತ್ಯ ವಾಹಿನಿʼ ಎಂಬ ಎರಡು ಸಂಚಾರಿ ಪುಸ್ತಕಾಲಯಗಳು ರಾಜ್ಯದಾದ್ಯಂತ ಸಂಚರಿಸುತ್ತಿವೆ. ಈ ಮೂಲಕ ಸಂಸ್ಥೆಯ ಪರಿಚಯವು ಕೇವಲ ಸಾಹಿತ್ಯಿಕ ಮತ್ತು ಬುದ್ಧಿಜೀವಿಗಳ ವಲಯಗಳಲ್ಲಿ ಮಾತ್ರವಲ್ಲದೆ, ಜನಸಾಮಾನ್ಯರಿಗೂ ಬಹಳ ಪರಿಣಾಮಕಾರಿಯಾಗಿ ತಲುಪುತ್ತಿದೆ. ರಾಜ್ಯದ ವಿವಿಧ ಸ್ಥಳಗಳಲ್ಲಿ ವಸ್ತು ಪ್ರದರ್ಶನ, ವಿಚಾರ ಸಂಕಿರಣ, ಸಾಹಿತ್ಯ-ಸಂವಾದಗಳನ್ನು ಹಮ್ಮಿಕೊಂಡು ಸಾಹಿತ್ಯ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ.
ಮಾನವೀಯ ಮೌಲ್ಯಗಳ ಉತ್ಥಾನ ಮತ್ತು ಸಾಮರಸ್ಯಕ್ಕಾಗಿ ಶಾಂತಿ ಪ್ರಕಾಶನ ಅನೇಕ ಪುಸ್ತಕಗಳನ್ನು ಪ್ರಕಟಿಸಿದೆ. ಇಂದಿನ ಸೌಹಾರ್ದತೆಯ ಶಿಥಿಲಾವಸ್ಥೆಯಲ್ಲಿ ಧರ್ಮವೊಂದರ ನೈಜ ತಿರುಳನ್ನು ಮುಕ್ತವಾಗಿ ಸಾದರಪಡಿಸಿ ಕೋಮು ಸೌಹಾರ್ದಕ್ಕೆ ಬಲ ನೀಡಿದೆ. ಜತೆಗೇ ಕನ್ನಡವನ್ನು ಶ್ರೀಮದ್ ಸಮೃದ್ಧಗೊಳಿಸಿದೆ.
ಶಾಂತಿ ಪ್ರಕಾಶನವು ಧಾರ್ಮಿಕ ಮೌಲ್ಯಗಳ ಪ್ರಚಾರ ಮಾಡಿ, ಮಾನವ ಸಮಾಜದಲ್ಲಿ ಶಾಂತಿ, ಸಹೋದರತೆ, ಸಮಾನತೆ, ಪರಸ್ಪರ ನಂಬಿಕೆ, ಸತ್ಯ, ನ್ಯಾಯ, ನೈತಿಕತೆಗಳು ನೆಲೆಸಿ ತನ್ಮೂಲಕ ಸಮಾಜ ಮತ್ತು ರಾಷ್ಟ್ರದ ಸರ್ವತೋಮುಖ ಕಲ್ಯಾಣವಾಗಲಿ ಎಂದು ಬಯಸುತ್ತದೆ. ಹೃದಯಗಳನ್ನು ಬೆಸೆಯುವ ಶಾಂತಿ ಪ್ರಕಾಶನದ ಈ ಪ್ರಾಮಾಣಿಕ ಕಳಕಳಿಯು ಈಡೇರುವಂತಾಗಲಿ.
.